Monday, May 19, 2008

ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ


ಪುತ್ತೂರಿನ ಕರ್ನಾಟಕ ಯಕ್ಷಭಾರತಿ ಆರನೇ ಬಾರಿಗೆ ದೆಹಲಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಹೊಸದಿಲ್ಲಿಯ ತುಳುನಾಡು ಅಭಿವೃದ್ಧಿ ವೇದಿಕೆಯ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗೋಕರ್ಣ ಮಂಡಲ, ದೆಹಲಿ ಕರ್ನಾಟಕ ಸಂಘ ಮತ್ತು ದೆಹಲಿ ಮಿತ್ರ ಇವುಗಳ ಸಹಯೋಗದೊಂದಿಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ `ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಕ್ಷಭಾರತಿ ಸಂಚಾಲಕ ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ಅಳಿಕೆಯವರನ್ನು ನೆನಪು ಮಾಡಿಕೊಂಡರು.
ರಾಮಯ್ಯ ರೈ ಯಕ್ಷಗಾನ ಸವ್ಯಸಾಚಿ. ಪಾರಂಪರಿಕ ಒಂದು ದೇಶೀ ಕಲೆಗೆ ತನ್ನ ವೈಯಕ್ತಿಕ ಛಾಪನ್ನು ಬೆರೆಸಿ ಸೃಜನಶೀಲ ಅಭಿವ್ಯಕ್ತಿ ನೀಡಿದ ಮೇರು ಕಲಾವಿದ ಎಂದವರು ಬಣ್ಣಿಸಿದರು.
ಅಳಿಕೆ ಸಂಸ್ಮರಣೆ ಬಳಿಕ ಕರ್ನಾಟಕ ಯಕ್ಷಭಾರತಿ, ಪುತ್ತೂರು ತಂಡವು ನಡೆಸಿಕೊಟ್ಟ ಕಾರ್ಯಕ್ರಮ `ಭೀಷ್ಮ ವಿಜಯ' ತಾಳಮದ್ದಳೆ'. ಸುಮಾರು ಎರಡೂವರೆ ತಾಸು ಜರಗಿತು. ಈ ಯಕ್ಷಗಾನ ಕೂಟ ಕಲಾವಿದರ ವಾದವೈಭವದೊಂದಿಗೆ ದೆಹಲಿ ಶೋತೃಗಳಲ್ಲಿ ಕೌತುಕ ಮೂಡಿಸಿತು. ಕುಕ್ಕುವಳ್ಳಿ, ಶ್ರೀಧರ ಡಿ.ಎಸ್, ಗಣರಾಜ ಕುಂಬಳೆ, ಡಾ.ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಆಶುಭಾಷಣದ ವಿಶಿಷ್ಠ ಮಾದರಿಗಳನ್ನು ತೆರೆದಿಟ್ಟರು.
ಎಂ.ಎಂ.ಸಿ ರೈ, ಡಾ.ಬಿ.ಬಿ. ಅಡ್ಕೋಳಿ, ರಾಧಾಭಟ್ ಪೂರಕ ಪಾತ್ರ ವಹಿಸಿದರು. ತೆಂಕು ಬಡಗುಗಳ ಪ್ರತಿಭಾನ್ವಿತ ಭಾಗವತ ನಾರಾಯಣ ಶಬರಾಯರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

`ಯಕ್ಷ ಪ್ರಮೀಳೆ' ದಿ. ಲೋಲಮ್ಮ ಪಚ್ಚನಾಡಿ


ಸುಮಾರು 19 ವರ್ಷಗಳ ಕಾಲ ನಿರಂತರ ಯಕ್ಷಗಾನ ಬಯಲಾಟವನ್ನು ಆಡಿಸುತ್ತಾ, ಯಕ್ಷಗಾನ ಕಲಾವಿದರನ್ನು ಗೌರವಿಸವ ಮೂಲಕ ಪ್ರೋತ್ಸಾಹಿಸಿ ಯಕ್ಷಗಾನಕ್ಕೆ ವಿಶಿಷ್ಟ ರೀತಿಯ ಪ್ರೋತ್ಸಾಹವನ್ನು ದಿ. ಲೋಲಮ್ಮ ಪಚ್ಚನಾಡಿ ನೀಡಿದ್ದರು.
ಮಂಗಳೂರಿನ ಮರೋಳಿ ಗ್ರಾಮದಲ್ಲಿ ದಿ.ತೋಮ ಪೂಜಾರಿ ಮತ್ತು ದಿ.ಪೂವಪ್ಪೆ ಪೂಜಾರ್ತಿ ದಂಪತಿ ಪುತ್ರಿಯಾಗಿ ಜನಿಸಿದ ಲೋಲಮ್ಮ ಪಚ್ಚನಾಡಿ ಶ್ರೀ ದೇವಿ ಬಗ್ಗೆ ಅಪಾರ ಭಕ್ತಿವುಳ್ಳವರಾಗಿದ್ದರು.
1968ರಲ್ಲಿ ಪದವಿನಂಗಡಿಯ ಸ್ವಸ್ತಿ ಗೇರು ಬೀಜ ಕಾಖರ್ಾನೆ ಮುಚ್ಚಲ್ಪಟ್ಟಾಗ ಅಲ್ಲಿ ಉದ್ಯೋಗಿಯಾಗಿದ್ದ ಇವರು ಇತರ ಸಹೋದ್ಯೋಗಿಗಳೊಂದಿಗೆ ಕಾಖರ್ಾನೆ ಮತ್ತೆ ತೆರೆದುಕೊಂಡರೆ ಶ್ರೀ ಕಟೀಲು ಮೇಳದ ಬಯಲಾಟ ಆಡಿಸುವುದಾಗಿ ಹರಕೆ ಹೇಳಿಕೊಂಡರು.
ಹರಕೆ ಹೇಳಿದ ಫಲವೋ ಎಂಬಂತೆ ಗೇರು ಬೀಜ ಕಾಖರ್ಾನೆ ಮತ್ತೆ ಆರಂಭಗೊಂಡಿತು. ಹರಕೆ ಸಂದಾಯ ಮಾಡಲು ಒಬ್ಬೊಬ್ಬರು ಒಂದೊಂದು ಕಾರಣಗಳಿಂದ ಹೊಣೆಗಾರಿಕೆ ಜಾರಿಸಿಕೊಂಡಾಗ ಇವರೇ ಮುಂದೆ ನಿಂತು ಹರಕೆಯ ಸೇವೆಯಾಟವನ್ನು ನಡೆಸಿದರು. ಮುಂದೆ ವರ್ಷಂಪ್ರತಿ ನಡೆಯುವಂತಾಗಿ ಒಟ್ಟು 39 ಹರಕೆ ಆಟವನ್ನು ಆಡಿಸಿದ ಲೋಲಮ್ಮ 40ನೇ ಆಟದ ಸಂದರ್ಭದಲ್ಲಿ ಕಟೀಲಮ್ಮನ ಪಾದ ಸೇರಿದ್ದರು.
ಕಿತ್ತು ತಿನ್ನುವ ಬಡತನದ ಮಧ್ಯೆಯೂ ಧನಸಂಗ್ರಹಮಾಡಿ 19 ವರ್ಷಗಳ ತನಕ ಪದವಿನಂಗಡಿಯಲ್ಲಿ ಬಯಲಾಟ ಆಡಿಸಿದ್ದು, 1983ರಲ್ಲಿ ಶ್ರೀ ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ವೇದಮೂತರ್ಿ ಶ್ರಿ ಗೋಪಾಲಕೃಷ್ಣ ಆಸ್ರಣ್ಣರನ್ನು ಕರೆಸಿ ಪದವಿನಂಗಡಿಗೆ `ದೇವಿನಗರ' ಎಂಬ ಹೆಸರನ್ನಿರಿಸಿದರು.
ಪಡ್ರೆ ಚಂದು, ಜನಾರ್ದನ ಜೋಗಿ ಮಂಜೇಶ್ವರ, ಸಂಪಾಜೆ ಶೀನಪ್ಪ ರೈ, ಕುಬಣೂರು ಶ್ರೀಧರ ರಾವ್ರವರಿಗೆ ಸನ್ಮಾನ, ಪಡ್ರೆ ಕುಮಾರರಿಗೆ ಗೌರವ ಪುರಸ್ಕಾರ, ಕೊರಗಪ್ಪ ಭಾಗವತರಿಗೆ ಸಂಮಾನ, ನೇಪಥ್ಯ ಕಲಾವಿದ ಕಲಾವಿದ ಕರಿಯಣ್ಣರಿಗೆ ಗೌರವ ಪುರಸ್ಕಾರ, ಸಂಜೀವ ಚೌಟರಿಗೆ ಇವರು ಸನ್ಮಾನ ನಡೆಸಿದ್ದರು.
ಲೋಲಮ್ಮನವರ ಕಲಾಸೇವೆಯನ್ನು ಕಂಡ ಹಲವಾರು ಸಂಘಸಂಸ್ಥೆಗಳೂ ಇವರನ್ನು ಗೌರವಿಸಿವೆ. ಸಂಸ್ಕಾರ ಭಾರತಿ ಮಂಗಳೂರು, ಪದವಿನಂಗಡಿ ದುಗರ್ಾ ಸೇವಾ ಸಮಿತಿ, ಶ್ರೀ ವಿಘ್ನೇಶ್ವರ ಯಕ್ಷಗಾನ ಮಂಡಳಿ ಪದವಿನಂಗಡಿ, ಪಚ್ಚನಾಡಿ ನಾಗರಿಕರು ಸೇರಿದಂತೆ ಇನ್ನೂ ಹಲವಾರು ಸಂಘಗಳು ಇವರನ್ನು ಗೌರವಿಸಿವೆ. ಮಂಗಳೂರಿನ ಪುರಭವನದಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ ಲೋಲಮ್ಮರವರಿಗೆ `ಯಕ್ಷ ಪ್ರಮೀಳ ಪ್ರಶಸ್ತಿ'ಯನ್ನೂ ನೀಡಿ ಗೌರವಿಸಲಾಗಿತ್ತು.
ಇಳಿಹರೆಯ 50ರ ವಯಸ್ಸಿನ ಬಳಿಕ ಬಯಲಾಟ ಸೇವೆಯನ್ನು ಆರಂಭಿಸಿ ಛಲ ಮತ್ತು ಆತ್ಮ ವಿಶ್ವಾಸದಿಂದ ನಡೆಸುತ್ತಾ ಬಂದಿರುವ ಲೋಲಮ್ಮ ಪಚ್ಚನಾಡಿ 2008ರ ಫೆ.25ರಂದು ದಿವಂಗತರಾದರು. ಇವರ ಕಲಾಸೇವೆಯನ್ನು ಇವರ ಮಕ್ಕಳು, ಮೊಮ್ಮಕ್ಕಳು ಮುಂದುವರಿಸಿದ್ದಾರೆ.