Tuesday, February 26, 2008

ಯಕ್ಷ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ

ದಿ.ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ಆರನೇ ವರ್ಷದ `ಯಕ್ಷಪ್ರತಿಷ್ಠಾನ ಪ್ರಶಸ್ತಿ' ಪ್ರದಾನ ಸಮಾರಂಭ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜರುಗಿತು.
ವೇಷಧಾರಿಗಳಾದ ಧರ್ಣಪ್ಪ ಶೆಟ್ಟಿ ಪೂಂಜಾಲಕಟ್ಟೆ, ಲಕ್ಷ್ಮಣ ಶೆಟ್ಟಿ ಅಳಿಕೆ, ಅರುವ ಕೊರಗಪ್ಪ ಶೆಟ್ಟಿ ಮತ್ತು ಮೇಳದ ಚೌಕಿ, ವಿದ್ಯುದ್ದೀಪಗಳ ಸುವ್ಯವಸ್ಥೆಗಳಿಗಾಗಿ ಗೋಪಾಲ ಪೂಜಾರಿ ಕುರಿಯಾಡಿ ಅವರಿಗೆ ಪ್ರತಿಷ್ಠಾನದ ವತಿಯಿಂದ ಶಾಲು, ಸ್ಮರಣಿಕೆ ಪ್ರಶಸ್ತಿ ಫಲಕ ಹಾಗೂ ತಲಾ 5000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ. ಚೌಟ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಶಸ್ತಿ ವಿಜೇತ ಹಿರಿಯ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅಭಿನಂದನಾ ಭಾಷಣ ಮಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟರ ಸಂಸ್ಮರಣೆ ಮಾಡಿದರು
ಪ್ರತಿಷ್ಠಾನದ ಅಧ್ಯಕ್ಷ ಸುರತ್ಕಲ್ ಜಯರಾಮ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಬಿ, ವಿದ್ವಾನ್ ಕೃಷ್ಣ ಭಟ್, ಮಂಚಿ ದೂಮಣ್ಣ ರೈ ಮತ್ತು ಪುಷ್ಪರಾಜ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ಡಾ.ಎನ್. ನಾರಾಯಣ ಶೆಟ್ಟಿ, ಕೆ. ಸಾಯಿನಾಥ ಪೂಂಜ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರಾಘವ ಚೌಟ ವಂದಿಸಿದರು. ಆನಂತರ ಪ್ರಸೂದನ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.

Monday, February 25, 2008

ಏಡ್ಸ್ : ಜನಜಾಗೃತಿಗೆ ಯಕ್ಷಗಾನ ಪ್ರದರ್ಶನ

ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಕೆ. ಮೋಹನ್ ನಿದರ್ೇಶನದ ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವಂತಹ ಯಕ್ಷಗಾನ ಪ್ರದರ್ಶನ ಅಭಿಯಾನವು ಫೆಬ್ರವರಿ 25 ರಂದು ಬೈಂದೂರು ಸಮೀಪದ ಶೀರೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಅನಂತರ ಮಾರ್ಚ್ 3 ರ ವರೆಗೆ ಕ್ರಮವಾಗಿ ಬೈಂದೂರು, ಕಿರಿಮಂಜೇಶ್ವರ, ಮರವಂತೆ, ಆಲೂರು, ನಾಡ, ಕಂಡ್ಲೂರು ಮತ್ತು ಶಂಕರನಾರಾಯಣದಲ್ಲಿ ಪ್ರದರ್ಶನಗಳು ನಡೆಯಲಿವೆ. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು ಮತ್ತು ಕನರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ, ಬೆಂಗಳೂರು ಮತ್ತು ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಸಂಯೋಜಿಸಲ್ಪಟ್ಟಿದೆ.
ಸುದರ್ಶನ ಉರಾಳ್, ನಾಗರಾಜ್, ಕಡ್ಲೆ ಗಣಪತಿ, ಲಂಬೋದರ ಹೆಗ್ಡೆ, ಮಾಧವ, ಭಾಸ್ಕರ, ವಿಶ್ವನಾಥ ಶೆಟ್ಟಿ, ಗಣೇಶ ಉಪ್ಪುಂದ, ತಮ್ಮಣ್ಣ ಗಾಂವ್ಕರ್, ಉದಯ, ನರಸಿಂಹ ತುಂಗ, ಇವರು ಕಲಾವಿದರಾಗಿ ಅಭಿನಯಿಸಿ ಜನಸಾಮಾನ್ಯರಿಗೆ ಏಡ್ಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಆರೋಗ್ಯಾಧಿಕಾರಿಗಳಾದ ಡಾ. ಎಂ.ಆರ್. ನಾಯ್ಕ್, ಡಾ. ರಾಮರಾವ್, ಆರೋಗ್ಯ ಶಿಕ್ಷಣಾಧಿಕಾರಿ ಅಪ್ಪುಸ್ವಾಮಿ ಮತ್ತು ಪ್ರದರ್ಶನ ನೀಡುವ ಯಕ್ಷದೇಗುಲ ತಂಡದ ಮುಖ್ಯಸ್ಥ ಸುದರ್ಶನ ಉರಾಳರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.

Saturday, February 23, 2008

ಇಂತಹ ಸ್ವಾಭಿಮಾನ ಅತೀ ಅಗತ್ಯ

ದೀಪಕ್ ರಾವ್ ಪೇಜಾವರರ ವಿವಾದಿತ ಚಿತ್ರ
ಯಕ್ಷಗಾನ ಕಲಾವಿದರ ದುರುಪಯೋಗ, ಶೋಷಣೆ ನಡೆಯುತ್ತಿದೆ ಎಂಬ ಅಸಮಾಧಾನದ ಕೇಳಿಬರುತ್ತಿರುವಾಗ ಕಲವು ಕಡೆ ಗಟ್ಟಿ ಧ್ವನಿಗಳು ಕೇಳಿಸುತ್ತಿರುವುದು ಸಮಾಧಾನಕರವಾದ ಅಂಶವಾಗಿದೆ.
ಯಕ್ಷಗಾನ ಹವ್ಯಾಸಿ ಕಲಾವಿದ ದೀಪಕ್ ರಾವ್ ಪೇಜಾವರ ತನ್ನ ಯಕ್ಷಗಾನದ ಚಿತ್ರವನ್ನು ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಯಾವುದೇ ಕಲಾವಿದರ ವೇಷಗಳನ್ನು ಅವರ ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ. ಈ ಬಗ್ಗೆ ದೀಪಕ್ ಅಸಮಾಧಾನವನ್ನು ವ್ಯಕ್ತಪಡಿಸಿ ಯಕ್ಷಗಾನದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ.
ಇತ್ತೀಚೆಗೆ ಯಕ್ಷಗಾನ ವೇಷಗಳು ರಂಗಸ್ಥಳ ಬಿಟ್ಟು ಹಾದಿ ಬೀದಿಗಳಲ್ಲಿ ಕಾಣಸಿಗುತ್ತವೆ. ಯಕ್ಷಗಾನದ ಮಾನವನ್ನು ಬೀದಿಯಲ್ಲಿ ಹರಾಜು ಮಾಡುತ್ತಿದೆ. ಒಂದು ಹೆಜ್ಜೆ ಮುಂದೆ ಎಂಬಂತೆ ಯಕ್ಷಗಾನ ವೇಷಗಳು ಗುಡ್ಡವನ್ನೂ ಹತ್ತಿವೆ. ಚಲನ ಚಿತ್ರವೊಂದರ ಹಾಡಿನ ದೃಶ್ಯದಲ್ಲಿ ಯಕ್ಷಗಾನದ ವೇಷಗಳು ಯಕ್ಷಗಾನದ ಚೌಕಟ್ಟನ್ನು ಮೀರಿ ಡಿಸ್ಕೋ ಹಾಡಿಗೆ ಹೆಜ್ಜೆ ಹಾಕಿದೆ. ಯಕ್ಷಗಾನದ ಬಗ್ಗೆ ಯೋಗ್ಯ ಚಲನ ಚಿತ್ರವನ್ನು ಮಾಡದೇ ಇರುವವರು ನಾಯಕ ನಾಯಕಿಯರ ಡ್ಯುಯೆಟ್ ಹಾಡಿಗೆ ಹೆಜ್ಜೆ ಹಾಕಿಸಿರುವುದು ಎಷ್ಟು ಸರಿ?
ಈ ಕಲಾವಿದರಾರೂ ಯಕ್ಷಗಾನದ ಮರ್ಯಾದೆಯ ಬಗ್ಗೆ ಆಲೋಚಿಸಿರಲಿಲ್ಲವೇ?

Sunday, February 17, 2008

ಕಲ್ಲಾಡಿ ಪ್ರಶಸ್ತಿ ಪ್ರಕಟ


ದಿ.ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ನಾಲ್ಕು ಮಂದಿ ಹಿರಿಯ ಕಲಾವಿದರಿಗೆ ನೀಡುವ ಪ್ರಶಸ್ತಿಯನ್ನು ಈ ಬಾರಿ ತೆಂಕುತಿಟ್ಟಿನ ಅಗ್ರಮಾನ್ಯ ವೇಷಧಾರಿಗಳಾದ ಧರ್ಣಪ್ಪ ಶೆಟ್ಟಿ ಪೂಂಜಾಲಕಟ್ಟೆ, ಅಳಿಕೆ ಲಕ್ಷ್ಮಣ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮತ್ತು ಮೇಳದ ಚೌಕಿ ಕುರಿಯಾಡಿ ಗೋಪಾಲ ಪೂಜಾರಿ ಇವರಿಗೆ ನ್ರಿತಿಷ್ಠಾನದ ಸಲಹಾ ಸಮಿತಿ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 17 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯನ್ನು ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ.ಚೌಟ ನೀಡಲಿದ್ದಾರೆ. ವಿಟ್ಲ ಕ್ಷೇತ್ರದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದವರು ವಿವರಿಸಿದರು.